ಆ.25ರಿಂದ ಮೈಸೂರಲ್ಲಿ ಕೆಪಿಎಲ್ ಪಂದ್ಯಾವಳಿ

ಆ.25ರಿಂದ ಮೈಸೂರಲ್ಲಿ ಕೆಪಿಎಲ್ ಪಂದ್ಯಾವಳಿ

LK   ¦    Aug 23, 2019 07:11:51 PM (IST)
ಆ.25ರಿಂದ ಮೈಸೂರಲ್ಲಿ ಕೆಪಿಎಲ್ ಪಂದ್ಯಾವಳಿ

ಮೈಸೂರು: ರೆಡ್ಮಿ ಕರ್ನಾಟಕ ಪ್ರೀಮಿಯರ್ ಲೀಗ್‍ನ ಎರಡನೇ ಹಂತ ಹಾಗೂ ಫೈನಲ್ ಪಂದ್ಯಾವಳಿಯು ಆ. 25 ರಿಂದ ನಗರದ ಕೆಎಸ್‍ಸಿಎ ಮೈದಾನದಲ್ಲಿ ನಡೆಯಲಿದೆ.

ಮೊದಲ ಹಂತದ ಪಂದ್ಯಗಳು ಬೆಂಗಳೂರಿನಲ್ಲಿ ನಡೆದಿದ್ದು, ಫೈನಲ್ ಪಂದ್ಯ ಸೇರಿದಂತೆ ಉಳಿದ ಪಂದ್ಯಾಗಳು ಮೈಸೂರಿನಲ್ಲಿ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಶುಕ್ರವಾರ ಟ್ರೋಫಿ ಬಿಡುಗಡೆಗೊಳಿಸಿದರು.

ಕೆಎಸ್‍ಸಿಎ ಅಧ್ಯಕ್ಷ ಸುಧಾಕರ ರಾವ್ ಮಾತನಾಡಿ, ಈವರೆಗೂ ಟೂರ್ನಿ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಬೆಂಗಳೂರಿನಲ್ಲಿ ಪಂದ್ಯಗಳನ್ನು ವೀಕ್ಷಿಸಲು ಬೃಹತ್ ಪ್ರಮಾಣದಲ್ಲಿ ಪ್ರೇಕ್ಷಸಕರು ಸೇರಿದ್ದರು. ಅಂತೆಯೇ ಟಿವಿಯಲ್ಲೂ ಸಾಕಷ್ಟು ಪ್ರಮಾಣದಲ್ಲಿ ಕ್ರಿಕೆಟ್ ಅಭಿಮಾನಿಗಳು ಪಂದ್ಯಗಳನ್ನು ವೀಕ್ಷಿಸಿದರು. ಮೈಸೂರಿನಲ್ಲಿಯೂ ಅತ್ಯಧಿಕ ಸಂಖ್ಯೆ ಪ್ರೇಕ್ಷಷಕರ ನಿರೀಕ್ಷೆಯಲ್ಲಿದ್ದೇವೆ ಎಂದರು.

ಬಳಿಕ ಮಾತನಾಡಿದ ಕೆಪಿಎಲ್‍ನ ರಾಯಭಾರಿ, ಚಲನಚಿತ್ರ ನಟಿ ರಾಗಿಣಿ ದ್ವಿವೇದಿ ಮಾತನಾಡಿ, ಕೆಎಸ್‍ಸಿಎ ಮತ್ತು ಕೆಪಿಎಲ್ ಕುಟುಂಬದಂತೆ ಇದೆ. ಪಂದ್ಯಾವಳಿಯು ಹೆಮ್ಮೆಯಿಂದ ನಡೆಯುತ್ತಿದೆ. ಕೆಪಿಎಲ್ ಎಂಟನೇ ಆವೃತ್ತಿ ನಡೆಯುತ್ತಿದ್ದು, ದೇಶದಲ್ಲಿ ಕೆಪಿಎಲ್ ಉತ್ತಮ ಹೆಸರು ಪಡೆದಿದೆ. ಇಂತಹ ವೇದಿಕೆ ಸಿಗುವುದು ಕಷ್ಟ. ಪ್ರತಿಭೆ ಇದ್ದರೂ ಅವಕಾಶ ಸಿಗುವುದಿಲ್ಲ. ಆದರೆ ಕೆಪಿಎಲ್ ಮೂಲಕ ಸಿಗಲಿದೆ. ಮೈಸೂರು ತುಂಬಾ ಅಚ್ಚುಮೆಚ್ಚಿನ ನಗರ. ಈ ಪಂದ್ಯಾವಳಿಗೆ ತುಂಬಾ ಪ್ರೋತ್ಸಾಹ ಮತ್ತು ಸಹಕಾರ ನೀಡಬೇಕು ಎಂದು ಕೋರಿದರು.

ಕೆಎಸ್‍ಸಿಎನ ವಿನಯ್ ಮೃತ್ಯುಂಜಯ ಮಾತನಾಡಿ, ಕೆಪಿಎಲ್ ಪಂದ್ಯಾವಳಿ ಉತ್ತಮವಾಗಿ ಮೂಡಿಬಂದಿದೆ. ಕೆಎಸ್‍ಸಿಎ ಬೆಂಗಳೂರು ಬಳಿಕ ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ನಡೆಸಲು ಉದ್ದೇಶಿಸಿದ್ದೆವು. ಮಳೆಯ ಕಾರಣದಿಂದ ಉಳಿದೆಲ್ಲಾ ಪಂದ್ಯವನ್ನೂ ಮೈಸೂರಿನಲ್ಲಿಯೇ ಆಯೋಜಿಸಲಾಗುತ್ತಿದೆ. ಕೆಪಿಎಲ್ ಪಂದ್ಯಾವಳಿಯು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಕನಸಿನ ಕೂಸು. ಆ. 25 ರಿಂದ ಪಂದ್ಯಾವಳಿಯು ಮೈಸೂರಿನಲ್ಲಿ ನಡೆಯಲಿದೆ. ಅಂತೆಯೇ ಈ ಬಾರಿ ಆರು ಮಹಿಳಾ ತಂಡಗಳನ್ನು ಆಯ್ಕೆ ಮಾಡಲಾಗಿತ್ತು. ಆದರೆ ಕಾರಣಾಂತರಗಳಿಂದ ಆಗುತ್ತಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಈ ತಂಡಗಳ ನಡುವೆ ಟಿ20 ಪಂದ್ಯ ಆಯೋಜಿಸಲಾಗುವುದು ಎಂದರು.

ಇದೇ ವೇಳೆ ಅಮಿತ್ ವರ್ಮ ಮತ್ತು ಜೆ.ಸುಚಿತ್ ಜೊತೆ ರಾಗಿಣಿ ಡ್ಯಾನ್ಸ್ ಮೈಸೂರು ವಾರಿಯರ್ಸ್ ತಂಡದ ನಾಯಕ ಅಮಿತ್ ವರ್ಮ ಮತ್ತು ಸ್ಟಾರ್ ಆಟಗಾರ ಜೆ. ಸುಚಿತ್ ಜೊತೆ ನಟಿ ರಾಗಿಣಿ ದ್ವಿವೇದಿ ಡ್ಯಾನ್ಸ್ ಮಾಡಿದರು. ಕೆಂಪೇಗೌಡ ಸಿನಿಮಾದ ಹಾಡೊಂದಕ್ಕೆ ಹೆಜ್ಜೆ ಹಾಕಿದರು. ಕಲಾವಿದೆ ಶಬರಿ ಗಾಣಿಗ ಅವರು ಅರಮನೆ ಮತ್ತು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಚಿತ್ರವನ್ನು ಬಿಡಿಸಿ ಮೆಚ್ಚುಗೆಗೆ ಪಾತ್ರರಾದರು.

ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಟ್ರೋಫಿ ಬಿಡುಗಡೆಗೊಳಿಸಿ, ಪಂದ್ಯಾವಳಿಗೆ ಶುಭ ಕೋರಿದರು. ಕೆಎಸ್‍ಸಿಎ ಮೈಸೂರು ವಲಯದ ಸಂಚಾಲಕ ಬಾಲಚಂದರ್ ಇದ್ದರು.