ಇತಿಹಾಸ ಎಂಬುದು ಅರ್ಧ ಸತ್ಯ: ಪ್ರೊ.ತುಕಾರಾಮ ಪೂಜಾರಿ

ಇತಿಹಾಸ ಎಂಬುದು ಅರ್ಧ ಸತ್ಯ: ಪ್ರೊ.ತುಕಾರಾಮ ಪೂಜಾರಿ

MV   ¦    Oct 12, 2019 07:24:26 PM (IST)
ಇತಿಹಾಸ ಎಂಬುದು ಅರ್ಧ ಸತ್ಯ: ಪ್ರೊ.ತುಕಾರಾಮ ಪೂಜಾರಿ

ಬಂಟ್ವಾಳ: ಇತಿಹಾಸ ಎಂಬುದು ಅರ್ಧ ಸತ್ಯ. ಇದರಲ್ಲಿ ಸತ್ಯದ ಹುಡುಕಾಟ ನಡೆಯಬೇಕು. ಮೌಖಿಕ ಇತಿಹಾಸದ ದಾಖಲೀಕರಣ ಸಂದರ್ಭ ಸತ್ಯಾನ್ವೇಷಣೆಯೂ ನಡೆಯುತ್ತದೆ, ಜನಸಾಮಾನ್ಯರ ನೆಲೆಗಟ್ಟಿನ ವಿಶ್ಲೇಷಣೆಯೂ ದೊರೆಯುತ್ತದೆ ಎಂದು ಬಿ.ಸಿ.ರೋಡ್ ಸಂಚಯಗಿರಿಯ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ತುಕಾರಾಮ ಪೂಜಾರಿ ಹೇಳಿದರು.

ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ, ವಸ್ತುಸಂಗ್ರಹಾಲಯದ ರಜತ ವರ್ಷಾಚರಣೆ ಹಿನ್ನೆಲೆಯಲ್ಲಿ ಶನಿವಾರ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯದಲ್ಲಿ ನಡೆದ ಮೌಖಿಕ ಇತಿಹಾಸ ದಾಖಲೀಕರಣ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಂಗಳೂರಿನ ದೈಜಿವರ್ಲ್ಡ್ ವ್ಯವಸ್ಥಾಪಕ ಪ್ರವೀಣ್ ತಾವ್ರೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನಸಾಮಾನ್ಯರ ಪರಿಕಲ್ಪನೆಯಡಿ ಇತಿಹಾಸ ದರ್ಶನ ನಡೆಸುವ ಕಾರ್ಯ ಶ್ಲಾಘನೀಯ ಎಂದರು.

ಮಡಿಕೇರಿ ಭೂಮಾಪನ ಅಳತೆ ವಿಭಾಗದ ಅಧಿಕಾರಿ ಗಜೇಂದ್ರ ಮಾತನಾಡಿ, ಪ್ರವಾಸೋದ್ಯಮ ಹಿನ್ನೆಲೆಯಲ್ಲಿ, ತುಳುನಾಡಿನ ಇತಿಹಾಸ ಪರಂಪರೆ ಅರಿವು ಮೂಡಿಸುವ ಕಾರ್ಯ ಹಿನ್ನಡೆಯಾಗುತ್ತಿದೆ. ಮಕ್ಕಳಿಗೆ, ಜನರಿಗೆ ತಲುಪಿಸುವ ಕಾರ್ಯ ನಡೆಯಬೇಕು. ಜನರನ್ನು ಇತಿಹಾಸದತ್ತ ಆಕರ್ಷಿಸುವ ಕಾರ್ಯ ನಡೆಯಬೇಕು ಸರಕಾರಿ ಶಾಲೆಗಳಿಗೆ ಉಚಿತ ಪುಸ್ತಕ, ಮಾಹಿತಿ ನೀಡುವ ಕಾರಗಯ ನಡೆಯಬೇಕು. ಇಂಥ ಜಾಗಗಳ ಪರಿಚಯ ಮಾಡಬೇಕು, ಪ್ರವಾಸೋದ್ಯಮ ಹಿನ್ನೆಲೆಯಲ್ಲಿ ಇದನ್ನು ಅಭಿವೃದ್ಧಿ ಪಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಯುಎಇ ಕನ್ನಡ ಸಂಸ್ಕೃತಿ ರಾಯಭಾರಿ ಸರ್ವೋತ್ತಮ ಶೆಟ್ಟಿ, ಉಡುಪಿ ಜಿಲ್ಲೆಯ ಇತಿಹಾಸ ಉಪನ್ಯಾಸ ಸಂಘದ ಕಾರ್ಯದರ್ಶಿ ಮರಿಯಾ ಜಸಿಂತಾ ಫುರ್ಟಾಡೋ, ದ.ಕ.ಜಿಲ್ಲಾ ಇತಿಹಾಸ ಉಪನ್ಯಾಸ ಸಂಘದ ಕಾರ್ಯದರ್ಶಿ ಪ್ರೊ.ಸಂತೋಷ್, ಕಾಸರಗೋಡು ಇತಿಹಾಸ ಉಪನ್ಯಾಸಕ ವೇದಿಕೆ ಸಂಚಾಲಕ ಪ್ರೊ.ರಾಜೇಂದ್ರ ರೈ, ಕೇಂದ್ರದ ಪ್ರೊ.ಆಶಾಲತಾ ಸುವರ್ಣ ಉಪಸ್ಥಿತರಿದ್ದರು. ಕೇಂದ್ರದ ಅಧ್ಯಕ್ಷ ಪ್ರೊ.ತುಕಾರಾಮ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸರಕಾರಿ ಕಾಲೇಜು ಪ್ರಭಾರ ಪ್ರಾಂಶುಪಾಲ ಪ್ರೊ. ವಿಲ್ಫ್ರೆಡ್ ಪ್ರಕಾಶ್ ಡಿಸೋಜ ಸ್ವಾಗತಿಸಿದರು. ಸಚೇತ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಶರತ್ ಆಳ್ವ ಪ್ರಾರ್ಥಿಸಿದರು.