ಮಗುವಿನ ಜನನ ನ್ಯೂನತೆ ತಡೆಗೆ ಏನು ಮಾಡಬೇಕು?

ಮಗುವಿನ ಜನನ ನ್ಯೂನತೆ ತಡೆಗೆ ಏನು ಮಾಡಬೇಕು?

LK   ¦    Jan 02, 2020 03:10:15 PM (IST)
ಮಗುವಿನ ಜನನ ನ್ಯೂನತೆ ತಡೆಗೆ ಏನು ಮಾಡಬೇಕು?

ಪ್ರತಿಯೊಬ್ಬ ದಂಪತಿಯೂ ಈಗ ಯಾವ ಮಗು ಬೇಕು ಎಂಬುವುದಕ್ಕಿಂತ ಹೆಚ್ಚಾಗಿ ಆರೋಗ್ಯವಂತ ಮಗುವನ್ನು ಇಷ್ಟಪಡುತ್ತಾರೆ. ಇದು ಸಂತಸದ ವಿಷಯವಾಗಿದೆ. ಇವತ್ತಿನ ಪರಿಸ್ಥಿತಿಯಲ್ಲಿ ಒಂದು ಮಗುವನ್ನು ಸಾಕಿ ಸಲಹುದೇ ಕಷ್ಟಕರವಾಗಿರುವಾಗ ಇರುವ ಒಂದು ಮಗು ಆರೋಗ್ಯವಾಗಿರಲೆಂದು ಬಯಸುವುದು ಅನಿವಾರ್ಯವಾಗಿದೆ.

ನೂತವಾಗಿ ಮದುವೆಯಾದ ದಂಪತಿ ಮಗುವನ್ನು ಬಯಸುತ್ತಾರೆಯಾದರೆ ಅಂತಹವರು ಆರೋಗ್ಯವಂತ ಮಗುವನ್ನು ಹೇಗೆ ಪಡೆಯಬಹುದು? ಗಂಭೀರ ಜನನ ನ್ಯೂನತೆಯನ್ನು ಹೇಗೆ ತಡೆಯಬಹುದು ಎಂಬುದರ ಬಗ್ಗೆ ಪ್ರಾಥಮಿಕ ಅರಿವು ದಂಪತಿಗಳಲ್ಲಿ ಇರಲೇ ಬೇಕಾಗುತ್ತದೆ. ಏಕೆಂದರೆ ನಮ್ಮ ದೇಶದಲ್ಲಿ ಪ್ರತಿ ವರ್ಷ ಹುಟ್ಟುವ ಸಾವಿರ ಮಕ್ಕಳ ಪೈಕಿ ಎಪ್ಪತ್ತು ಮಕ್ಕಳು ಜನನ ನ್ಯೂನತೆಯೊಂದಿಗೆ ಹುಟ್ಟುತ್ತಾರೆ ಎಂದು ಹೇಳಲಾಗಿದೆ. ಹೀಗಿರುವಾಗ ಒಂದು ವೇಳೆ ದಂಪತಿ ಗರ್ಭಧಾರಣೆ ವೇಳೆ ವೈದ್ಯರ ಸಲಹೆ ಮತ್ತು ಕೆಲವು ಪರೀಕ್ಷೆಗಳನ್ನು ಮಾಡಿಸದೆ ನಿರ್ಲಕ್ಷ್ಯ ತೋರಿದರೆ ಕೆಲವೊಮ್ಮೆ ಹುಟ್ಟುವ ಮಗು ವಿಕಲಚೇತನವಾಗಿಯೋ, ಬುದ್ದಿಮಾಂದ್ಯವಾಗಿ ಹುಟ್ಟಿದರೆ ಅಚ್ಚರಿಪಡಬೇಕಾಗಿಲ್ಲ. ಹೀಗಾಗಿ ಪ್ರತಿಯೊಬ್ಬ ದಂಪತಿ ಮಗು ಪಡೆಯುವ ವೇಳೆ ಒಂದಷ್ಟು ಪರೀಕ್ಷೆಗಳನ್ನು ಮಾಡಿಸುವುದು, ವೈದ್ಯರ ಸಲಹೆಯಂತೆ ಜೀವನ ಕ್ರಮ ಅಳವಡಿಸಿಕೊಳ್ಳುವುದು, ಚಿಕಿತ್ಸೆ ಪಡೆಯುವುದನ್ನು ಮರೆಯಬಾರದು.

ಒಂದು ಆರೋಗ್ಯವಂತ ಮಗುವನ್ನು ಪಡೆಯಬೇಕಾದರೆ ಏನು ಮಾಡಬೇಕು ಎಂಬುದರ ಒಂದಷ್ಟು ಸಲಹೆಗಳನ್ನು ವೈದ್ಯರು ತಿಳಿಸಿದ್ದಾರೆ. ಅದೇನು ಎಂದು ನೋಡುವುದಾದರೆ ಆ ಕುರಿತ ಕೆಲವು ಮಾಹಿತಿ ಇಲ್ಲಿದೆ.

ಮದುವೆಗೆ ಮುನ್ನ ಗಮನಹರಿಸಬೇಕಾದ ವಿಷಯ ಏನೆಂದರೆ ರಕ್ತ ಸಂಬಂಧಿಯೊಂದಿಗಿನ ಮದುವೆಯನ್ನು ಆದಷ್ಟು ತಡೆಯಬೇಕು. ಗರ್ಭಧರಿಸಿದ ಮಹಿಳೆ ತಮ್ಮ ಕೌಟುಂಬಿಕ ಹಿನ್ನಲೆಯನ್ನು ವೈದ್ಯರಿಗೆ ತಿಳಿಸಬೇಕು.

ಇದಲ್ಲದೆ ಆರೋಗ್ಯವಂತ ಮಗು ಪಡೆಯಬೇಕಾದರೆ ತಾಯಿಯ ಆರೋಗ್ಯವೂ ಮುಖ್ಯವಾಗಿರುವುದರಿಂದ ಗರ್ಭಧಾರಣೆಗೆ ಎರಡು ತಿಂಗಳ ಮೊದಲು ಮತ್ತು ಗರ್ಭಿಣಿಯಾದ ದಿನಗಳಲ್ಲಿ ಉತ್ತಮ ವಿಟಮಿನ್, ಪೊಲಿಕ್ ಅಸಿಡ್, ಪ್ರೊಟೀನ್‍ಯುಕ್ತ ಪದಾರ್ಥಗಳನ್ನು ವೈದ್ಯರ ಸಲಹೆ ಮೇರೆಗೆ ಸೇವಿಸಬೇಕು.

ಇನ್ನು ಗರ್ಭಿಣಿಯರು ಗರ್ಭಾವಸ್ಥೆಯಲ್ಲಿದ್ದಾಗ ಆಲ್ಕೋಹಾಲ್, ತಂಬಾಕು, ಧೂಮಪಾನವನ್ನು ಮಾಡಬಾರದು. ಇದು ಗರ್ಭದಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರಬಹುದು. ಇನ್ನು ಚಿಕ್ಕಪುಟ್ಟ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡಾಗಲೆಲ್ಲ ವೈದ್ಯರ ಸಲಹೆ ಪಡೆಯದೆ ಯಾವುದೇ ರೀತಿ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವುದು, ಔಷಧಿ ಮಾತ್ರೆಗಳನ್ನು ಸೇವಿಸುವುದನ್ನು ಮಾಡಬಾರದು. ಒಂದು ವೇಳೆ ದೀರ್ಘ ಕಾಲದ ಔಷಧಿಗಳನ್ನು ಸೇವಿಸುತ್ತಿದ್ದರೆ ಆ ಬಗ್ಗೆ ವೈದ್ಯರಿಗೆ ಮಾಹಿತಿ ನೀಡುವುದು ಒಳ್ಳೆಯದು. ಯಾವುದೇ ವಿಷಯವನ್ನು ಮುಚ್ಚಿಡಬಾರದು.

ಮದುವೆಗೆ ಮುನ್ನ ಅಥವಾ ಗರ್ಭಧಾರಣೆಗೆ ಮುನ್ನ ವೈದ್ಯರ ಸಲಹೆ ಪಡೆಯುವುದು ಉತ್ತಮ ಜರ್ಮನ್ ದಡಾರ(ರುಬೆಲ್ಲಾ) ಸೇರಿದಂತೆ ಇತರೆ ರೋಗಗಳ ವ್ಯಾಕ್ಸಿನೇಶನ್ ಬಗ್ಗೆಯೂ ತಿಳಿದುಕೊಳ್ಳುವುದು ಒಳ್ಳೆಯದು.

ಇದಾದ ಬಳಿಕ ಜನನ ನ್ಯೂನತೆಗಳನ್ನು ಬೇಗನೆ ಪತ್ತೆ ಹಚ್ಚುವ ಸಲುವಾಗಿ ಮೆಟರ್ನಲ್ ಸೆರಮ್ ಸ್ಕ್ರೀನಿಂಗ್ ಮತ್ತು 11 - 14 ವಾರಗಳ ಭ್ರೂಣದ ಸೊನೋಗ್ರಫಿ ಮಾಡಿಸಿಕೊಳ್ಳಬೇಕು. ಕೆಲವು ಸಲ ಭ್ರೂಣವು ಪರಿಣಾಮ ಬೀರುವ ಸಾಧ್ಯತೆ ಇದೆಯಾ ಎಂಬುದನ್ನು ದೃಢೀಕರಿಸಿಕೊಳ್ಳುವ ಅಗತ್ಯತೆ ಇರುವುದರಿಂದ ಕೊರಿಯೋನ್ ವಿಲ್ಲಸ್ ಸಾಂಪ್ಲಿಂಗ್ ಅಥವಾ ಎಮ್ನಿಯೊಟಿಕ್ ಪ್ಲುಯಿಡ್ ಪರೀಕ್ಷೆಯನ್ನು ಮಾಡುವುದರಿಂದ ಜನನ ನ್ಯೂನತೆಯನ್ನು ತಡೆದು ಆರೋಗ್ಯವಂತ ಮಗುವನ್ನು ಪಡೆಯಲು ಸಾಧ್ಯವಾಗುತ್ತದೆ.

ಇಷ್ಟೇ ಅಲ್ಲದೆ ಮಗು ಹುಟ್ಟಿದ 48 ಗಂಟೆಯೊಳಗೆ ಮೆಟಬೊಲಿಕ್, ಶ್ರವಣ ಮತ್ತು ಜನ್ಮಜಾತ ಹೃದಯದ ದೋಷಗಳ ಬಗ್ಗೆ ತಿಳಿಯಲು ನವಜಾತ ಸ್ಕೀನಿಂಗ್ ಮಾಡಿಸುವುದು ಅಗತ್ಯವಾಗಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಮಗುವನ್ನು ಪಡೆಯಲು ಉದ್ದೇಶಿಸಿರುವ ದಂಪತಿ ವೈದ್ಯರನ್ನು ಭೇಟಿ ಮಾಡಿ ಅಗತ್ಯ ಸಲಹೆ ಪಡೆದು ಮುಂದುವರೆಯುವುದು ಉತ್ತಮವಾಗಿದೆ.