ಶಿವಮೊಗ್ಗ ರಂಗಾಯಣ: ಫೆ. 15ರಿಂದ ಬಹುಮುಖಿ ರಾಷ್ಟ್ರೀಯ ನಾಟಕೋತ್ಸವ ಆಯೋಜನೆ

ಶಿವಮೊಗ್ಗ ರಂಗಾಯಣ: ಫೆ. 15ರಿಂದ ಬಹುಮುಖಿ ರಾಷ್ಟ್ರೀಯ ನಾಟಕೋತ್ಸವ ಆಯೋಜನೆ

YK   ¦    Feb 13, 2020 11:02:22 AM (IST)
ಶಿವಮೊಗ್ಗ ರಂಗಾಯಣ:  ಫೆ. 15ರಿಂದ ಬಹುಮುಖಿ ರಾಷ್ಟ್ರೀಯ ನಾಟಕೋತ್ಸವ ಆಯೋಜನೆ

ಶಿವಮೊಗ್ಗ : ಶಿವಮೊಗ್ಗ ರಂಗಾಯಣದಲ್ಲಿ ಫೆಬ್ರವರಿ 15ರಿಂದ 22ರವರೆಗೆ ಎಂಟು ದಿನಗಳ ಕಾಲ ರಾಷ್ಟ್ರೀಯ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ನಿರ್ದೇಶಕ ಸಂದೇಶ ಜವಳಿ ಅವರು ತಿಳಿಸಿದರು.

ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾಟಕೋತ್ಸವವನ್ನು ಫೆ.15ರಂದು ಸಂಜೆ 6.30ಕ್ಕೆ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ.ಟಿ.ರವಿ ಅವರು ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಅಧ್ಯಕ್ಷತೆ ವಹಿಸುವರು. ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ ಅವರು ರಂಗ ತಂಡಗಳ ವಿಶಿಷ್ಟ ನಾಟಕಗಳ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸುವರು ಎಂದು ಹೇಳಿದರು.

ನಾಟಕ ಪ್ರದರ್ಶನ: ಫೆ.15ರಂದು ಶನಿವಾರ ಮಣಿಪುರದ ಎನ್.ಟಿ.ಥಿಯೇಟರ್ ತಂಡದಿಂದ ಹಂಟರ್ಸ್ ಸಾಂಗ್’ ಮಣಿಪುರಿ ನಾಟಕ ಪ್ರದರ್ಶನ, ಫೆ.16ರಂದು ರಾಹಿ ಥಿಯೇಟರ್ ಮುಂಬಯಿ ತಂಡದಿಂದ ಜಲ್ಕಾರಿ’ ಹಿಂದಿ ನಾಟಕ , ಫೆ.17ರಂದು ಪಾದುವ ರಂಗ ಅಧ್ಯಯನ ಕೇಂದ್ರ ಮಂಗಳೂರು ತಂಡದಿಂದ ಕೆಂಡೋನಿಯನ್ಸ್’ ತುಳು ನಾಟಕ, ಫೆ. 18ರಂದು ರಂಗಾಯಣ ಧಾರವಾಡದ ವಿದಿಶಾ ಪ್ರಹಸನ ಕನ್ನಡ ನಾಟಕ, ಫೆ.19 ರಂದು ನೃತ್ಯ ನಿಕೇತನ ಕೊಡವೂರು ಉಡುಪಿ ತಂಡದಿಂದ ನಾರಸಿಂಹ’ ನೃತ್ಯ ನಾಟಕ, ಫೆ.20 ರಂದು ಸ್ಥಳೀಯ ಕಲಾ ತಂಡಗಳಿಂದ ರಂಗಗೀತೆ ಮತ್ತು ರಂಗರೂಪಕ ಪ್ರದರ್ಶನ, ಫೆ.21ರಂದು ಆಳ್ವಾಸ್ ರಂಗ ಆಧ್ಯಯನ ಕೇಂದ್ರ ಮೂಡಬಿದರೆ ತಂಡದಿಂದ ಧಾಂ ಧೂಂ ಸುಂಟರಗಾಳಿ’ ಕನ್ನಡ ನಾಟಕ, ಫೆ.22ರಂದು ಅನನ್ಯ ಬೆಂಗಳೂರು ತಂಡದಿಂದ ಉಚ್ಛಿಷ್ಟ’ ಕನ್ನಡ ನಾಟಕ ಪ್ರದರ್ಶನ ನಡೆಯಲಿದೆ.

 

ವಿಚಾರ ಸಂಕಿರಣ ಮತ್ತು ಛಾಯಾಚಿತ್ರ ಪ್ರದರ್ಶನ: ನಾಟಕೋತ್ಸವದ ಅಂಗವಾಗಿ ರಂಗಭೂಮಿ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ. ಶಿಕ್ಷಣದಲ್ಲಿ ರಂಗಭೂಮಿ ವಿಷಯದಲ್ಲಿ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ಫೆ.20ರಂದು ಬೆಳಿಗ್ಗೆ 11ಗಂಟೆಗೆ ಬಿ.ಎಂ.ಕುಮಾರಸ್ವಾಮಿ ಅವರು ವಿಚಾರ ಸಂಕಿರಣ ಉದ್ಘಾಟಿಸುವರು. ಸಾಮಾಜಿಕ ಮನೋ ವಿಕಸನದಲ್ಲಿ ರಂಗಭೂಮಿಯ ಪಾತ್ರ’ ವಿಷಯದ ಕುರಿತು ಪ್ರಥಮ ಗೋಷ್ಟಿಯಲ್ಲಿ ಡಾ.ಸಂಧ್ಯಾ ಕಾವೇರಿ, ಪ್ರಾಂಶುಪಾಲರು, ಕಟೀಲ್ ಅಶೋಕ ಪೈ ಕಾಲೇಜು ಇವರು ವಿಷಯ ಮಂಡಿಸುವರು. ಯುವ ಸಮೂಹ ಮತ್ತು ರಂಗಭೂಮಿ’ ಕುರಿತ ಎರಡನೇ ಗೋಷ್ಟಿಯಲ್ಲಿ ಪ್ರೊ.ಗೌರಿಶಂಕರ್ ಅವರು ವಿಷಯ ಮಂಡಿಸುವರು. ಶಿಕ್ಷಣದಲ್ಲಿ ರಂಗ ಭೂಮಿಯ ಪ್ರಾತ್ಯಕಿಕೆ’ ಕುರಿತು ಡಾ.ಸಾಸ್ವೆಹಳ್ಳಿ ಸತೀಶ್ ವಿಷಯ ಮಂಡಿಸುವರು. ಮಕ್ಕಳ ರಂಗಭೂಮಿಯಲ್ಲಿ ತಂತ್ರಜ್ಞಾನದ ಅಳವಡಿಕೆ’ ಕುರಿತು ಶ್ರವಣ್ ಹೆಗ್ಗೋಡು ಅವರು ವಿಷಯ ಮಂಡಿಸುವರು. 

ರಂಗ ಗೌರವ: ಶಿವಮೊಗ್ಗ ರಂಗಾಯಣದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಹೊ.ನ.ಸತ್ಯ, ಇಕ್ಬಾಲ್ ಅಹ್ಮದ್ ಮತ್ತು ಡಾ.ಎಂ.ಗಣೇಶ್ ಅವರನ್ನು ನಾಟಕೋತ್ಸವದ ಸಂದರ್ಭದಲ್ಲಿ ಗೌರವಿಸಲಾಗುವುದು ಎಂದರು. ಪ್ರತಿ ನಾಟಕಕ್ಕೆ 20 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದ್ದು, ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನಾಟಕೋತ್ಸವದಲ್ಲಿ ಭಾಗವಹಿಸಿ ಪ್ರೋತ್ಸಾಹಿಸುವಂತೆ ಅವರು ಮನವಿ ಮಾಡಿದರು.

ರಂಗ ಸಮಾಜ ಸದಸ್ಯ ಹಾಲಸ್ವಾಮಿ, ಶಿವಮೊಗ್ಗ ರಂಗಾಯಣ ಆಡಳಿತಾಧಿಕಾರಿ ಶಫಿ ಸಾದುದ್ದೀನ್, ನಾಟಕೋತ್ಸವದ ಸಂಚಾಲಕ ಮಂಜುನಾಥ ಸ್ವಾಮಿ ಉಪಸ್ಥಿತರಿದ್ದರು.