ನಟಿ ಭಾರತಿಯಿಂದ ನಂಜನಗೂಡಿನ ನೆರಸಂತ್ರಸ್ತರಿಗೆ ಸಾಂತ್ವನ

ನಟಿ ಭಾರತಿಯಿಂದ ನಂಜನಗೂಡಿನ ನೆರಸಂತ್ರಸ್ತರಿಗೆ ಸಾಂತ್ವನ

LK   ¦    Aug 20, 2019 07:15:33 PM (IST)
ನಟಿ ಭಾರತಿಯಿಂದ ನಂಜನಗೂಡಿನ ನೆರಸಂತ್ರಸ್ತರಿಗೆ ಸಾಂತ್ವನ

ನಂಜನಗೂಡು: ನಂಜನಗೂಡಿಗೆ ಭೇಟಿ ನೀಡಿದ ಹಿರಿಯ ನಟಿ ಭಾರತಿವಿಷ್ಣುವರ್ಧನ್ ಅವರು ನಂಜುಂಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ದೇವಾಲಯದ ಒಳಭಾಗದಲ್ಲಿರುವ ಬಿಲ್ವಪತ್ರ ಮರಕ್ಕೆ ಪ್ರದಕ್ಷಿಣೆ ಹಾಕಿ ನಮಸ್ಕರಿಸಿ, ಪ್ರಾರ್ಥಿಸಿದರು. ಪೂಜೆ ಸಲ್ಲಿಸಿದ ಬಳಿಕ ಕಪಿಲಾ ನದಿಯ ಪ್ರವಾಹದಿಂದ ಸಂತ್ರಸ್ತರಾಗಿ ಗಂಜಿಕೇಂದ್ರದಲ್ಲಿರುವ ಆಶ್ರಯಪಡೆದವರನ್ನು ಭೇಟಿ ಮಾಡಿದ ಭಾರತಿ ವಿಷ್ಣುವರ್ಧನ್ ಅವರು, ಸಂತ್ರಸ್ತರಿಗೆ ಬೇಕಾಗಿರುವ ಬಟ್ಟೆ, ಆಹಾರ ಪದಾರ್ಥ, ಚಾಪೆ ತಿಂಡಿ-ತಿನಿಸುಗಳ ಜೊತೆಗೆ ಪುಟ್ಟ ಮಕ್ಕಳಿಗೆ ನೋಟ್ ಪುಸ್ತಕ ಪೆನ್ನು, ಮಕ್ಕಳು ಧರಿಸುವ ಬಟ್ಟೆಗಳನ್ನು ಭಾರತಿ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ವಿತರಿಸಿದರು. ಸಂತ್ರಸ್ತರ ಜೊತೆ ಕುಳಿತು ಸುಮಾರು ಅರ್ಧ ತಾಸಿಗೂ ಹೆಚ್ಚು ಕಾಲ ಕಳೆದು ಸಮಸ್ಯೆಗಳನ್ನು ಆಲಿಸಿದರು.

ಈ ವೇಳೆ ಮಾತನಾಡಿದ ಅವರು ತಾಲ್ಲೂಕು ಮತ್ತು ಜಿಲ್ಲಾ ಆಡಳಿತದ ಅಧಿಕಾರಿಗಳು ಹಾಗೂ ಸರ್ಕಾರದ ಜನಪ್ರತಿನಿಧಿಗಳು ಈಗಾಗಲೇ ಅವರ ಜೀವನದ ರೂಪುರೇಷೆಗೆ ಸಿದ್ಧತೆ ಮಾಡಿಕೊಂಡಿದ್ದು, ಪ್ರವಾಹದ ನೀರಿಗೆ ಕೊಚ್ಚಿಹೋಗಿರುವ ಬದುಕನ್ನು ಯಥಾಪ್ರಕಾರದ ಬದಲಾವಣೆ ಮಾಡಲು ಈಗಾಗಲೇ ಕ್ರಮ ಕೈಗೊಂಡಿರುವುದರಿಂದ ನಾವು ಕೇವಲ ಅಳಿಲುಸೇವೆ ಮಾಡಿದ್ದಾಗಿ ಹೇಳಿದರು.

ಈ ವೇಳೆ ತಹಸೀಲ್ದಾರ್ ಮಹೇಶ್‍ಕುಮಾರ್ ಮತ್ತು ಸಿಬ್ಬಂದಿ, ವಿಷ್ಣು ಸೇನಾ ಸಮಿತಿ ಅಧ್ಯಕ್ಷ ಪಾರ್ಥಸಾರಥಿ, ಚಿತ್ರನಟ ರವಿಚೇತನ್, ಉದ್ಯಮಿ ದರ್ಶನ್, ಹರೀಶ್ ಆಲ್ವಿನ್, ಕೃಷ್ಣಪ್ಪ, ಗಿರೀಶ್ ಇದ್ದರು.